ಕನ್ನಡ ವಿಮರ್ಶೆಯ ಲೋಕದಲ್ಲಿ ಕೆ. ವಿ. ನಾರಾಯಣ (ಕೆವಿಎನ್) ಅವರು ‘ಪಾಥ್ ಬ್ರೇಕರ್’ ವಿಮರ್ಶಕರಾಗಿದ್ದಾರೆ. ಕೆವಿಎನ್ ಅವರು ತಮ್ಮ ವಿಶಿಷ್ಟ ಗ್ರಹಿಕೆಗಳಿಂದ ಹಾಗೂ ವಿಭಿನ್ನ ಚಿಂತನಾ ಕ್ರಮಗಳಿಂದ ತಮ್ಮದೇ ಆದ ವಿಮರ್ಶೆಯ ಮಾದರಿಯೊಂದನ್ನು ರೂಪಿಸಿಕೊಂಡವರು. ಅವರ ವಿಮರ್ಶೆಯು ಸಾಹಿತ್ಯ ಮತ್ತು ಪರಂಪರೆಯನ್ನು ಓದುವ, ಗ್ರಹಿಸುವ ವಿಭಿನ್ನ ದಾರಿಗಳನ್ನು ತೆರೆದಿಟ್ಟಿತು. ಕಳೆದ ಶತಮಾನದ ಕೊನೆಯ ದಶಕದಲ್ಲಿ ಪ್ರಕಟವಾದ ‘ಬೇರು ಕಾಂಡ ಚಿಗುರು’ ಇದಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ.
ಕೆವಿಎನ್ ಅವರ ‘ಬೇರು ಕಾಂಡ ಚಿಗುರು’ ಕೃತಿಯು ತನ್ನ ಕಾಲಘಟ್ಟದ ಸಾಹಿತ್ಯಕ್ಕಷ್ಟೇ ಸೀಮಿತವಾದದ್ದಲ್ಲ. ಇದರ ಹರವು ಮತ್ತು ವ್ಯಾಪ್ತಿಯು ವಿಸ್ತ್ರತವಾದದ್ದು. ಈ ಕೃತಿಯು ತನ್ನ ಸಮಕಾಲೀನ ಸಾಹಿತ್ಯ ಕೃತಿಗಳ ಜೊತೆಯಲ್ಲಿ ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಾಹಿತ್ಯವನ್ನು ಸಾತತ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ಇದು ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ಕಾರ್ಯವಿಧಾನದ ದಿಕ್ಕನ್ನು ಬದಲಿಸಿತು. ಕೆವಿಎನ್ ಅವರ ದೃಷ್ಟಿಯಲ್ಲಿ ವಿಮರ್ಶೆಯೆಂದರೆ ಸಾಹಿತ್ಯ ಕೃತಿಗಳ ‘ಇರುವಿಕೆ’ಯನ್ನಷ್ಟೇ ಗಮನಿಸುವುದಲ್ಲ; ಅದರ ‘ಆಗುವಿಕೆ’ಯ ಕಡೆಗಿನ ಪಯಣ ಎಂದು ತಿಳಿಯುತ್ತಾರೆ. ಅವರು ಸಾಹಿತ್ಯ ಕೃತಿಗಳ ಸಹಚರರಾಗಿ ತಮ್ಮ ನಿಲುವುಗಳನ್ನು ಕಟ್ಟಿಕೊಡುತ್ತಾರೆ. ಆದ್ದರಿಂದ ಈ ಕೃತಿಯು ಕನ್ನಡ ವಿಮರ್ಶೆ ಮತ್ತು ಸಂಸ್ಕೃತಿಯ ಚಿಂತನೆಯಲ್ಲಿ ಭಿನ್ನವಾಗಿ ನಿಲ್ಲುತ್ತದೆ.
ಕೆವಿಎನ್ ಅವರ ವಿಮರ್ಶೆಯು ಸಾಹಿತ್ಯ ಕೃತಿಗಳನ್ನು ಗ್ರಹಿಸುವ ವಿಧಾನದಲ್ಲಿ ಹಲವು ಪಲ್ಲಟಗಳನ್ನು ಸಾಧಿಸಿತು. ಇಲ್ಲಿಯ ಬಹುತೇಕ ಬರಹಗಳು ಇಂದಿಗೂ ನಮ್ಮ ಓದಿನ ಕ್ರಮಗಳನ್ನು, ಗ್ರಹಿಕೆಯ ವಿಧಾನಗಳನ್ನು ಬದಲಿಸಿಕೊಳ್ಳುವಂತೆ ಒತ್ತಾಯಿಸುತ್ತವೆ. ಗಂಭೀರ ಸಾಹಿತ್ಯ ವಿಮರ್ಶೆಯು ಕುಗ್ಗುತ್ತಿರುವ ಇಂದಿನ ದಿನಮಾನದಲ್ಲಿ ಈ ಕೃತಿಯು ಈಗ ಮತ್ತೆ ಓದುಗರಿಗೆ ದೊರಕುವಂತಾಗಿದ್ದು ಸಂತೋಷದ ಸಂಗತಿಯಾಗಿದೆ.
ಸುಭಾಷ್ ರಾಜಮಾನೆ











Reviews
There are no reviews yet.