ಈ ಬರಹಕ್ಕೆ ‘ಸ್ಮೃತಿ ಪಟಲದಿಂದ’ ಎಂಬ ಹೆಸರು ಕೊಟ್ಟಿದ್ದೇನೆ. ಆದರೆ ನನ್ನ ನೆನಪುಗಳು ಅಷ್ಟೊಂದು ಗಾಢ ಎಂಬ ಧೈರ್ಯ ನನಗಿಲ್ಲ. ಸಂದ ವರ್ಷಗಳ ನೆನಪಿಗೆ ಕಟ್ಟು ಬೀಳದೆ, ನನ್ನಲ್ಲಿ ಆಸಕ್ತಿಯನ್ನು ಕೆರಳಿಸಿ, ಒಂದಲ್ಲ ಒಂದು ರೀತಿಯ ಕೆಲಸಗಳಿಗೆ ನನ್ನನ್ನು ಪ್ರೇರೇಪಿಸಿದ ವಿಷಯಗಳ ದೃಷ್ಟಿಯಿಂದ ಇದನ್ನು ಬರೆಯತೊಡಗಿದ ಕಾರಣವಿಷ್ಟೆ-ಆಯುಷ್ಯ ನಮ್ಮ ಪ್ರಯತ್ನವಿಲ್ಲದೆಯೇ ಸಾಗುತ್ತದೆ… ನನ್ನ ಅಭಿರುಚಿಗಳಲ್ಲಿ ಯಾವುದನ್ನು ಬೆಳೆಯಿಸಿದರೆ ನನಗೆ ಸಂತೋಷ ದೊರೆಯಬಹುದು ಎಂದು ಯೋಚಿಸುವಾಗ, ನನ್ನನ್ನೇ ನಾನು ತಿಳಿದುಕೊಂಡು ಅಳೆಯಬೇಕಾಗಿ ಬಂತು. ಹಾಗೆ ನನ್ನ ಮನಸ್ಸನ್ನು ಸೆಳೆದ ವಿಷಯಗಳಿಗೆ ಕೈ ತುಡುಕಿಸಿದೆ. ಯಾವುದು ನನ್ನ ಎಟುಕಿನಲ್ಲಿದೆ, ಯಾವುದು ಇಲ್ಲ- ಎಂದು ಕಂಡು ಹಿಡಿಯುವ ಪ್ರಯತ್ನವನ್ನು ಮಾಡಿದೆ. ಅಂಥ ಹಲವಾರು ಸಂಗತಿಗಳು, ವಿಷಯಗಳು ನನ್ನ ಅಭಿರುಚಿಯನ್ನು ಬೆಳೆಯಿಸಿದಾಗ, ಅವುಗಳಲ್ಲೂ ನಾನು ದುಡಿಯಬಲ್ಲೆ ಎನಿಸಿದಾಗ, ಏನೇನೋ ಕೆಲಸಗಳನ್ನು ಮಾಡಿದೆ. ಮಾಡ ಮಾಡುತ್ತ ಅವೆಲ್ಲವೂ ಬದುಕಿಗೆ ಬೇಕೇ ಬೇಕು ಅನಿಸುತ್ತಲಿತ್ತು. ಬದುಕಿನ ರೂಪ ವಿಶ್ವರೂಪ! ಅದರ ಸೊಗಸು ಬಹುರೂಪ. ಅದರಿಂದ ನಾವು ಪಡೆಯಬಹುದಾದ ಸುಖ, ಸಂತಸ ಕೂಡ ಸಾವಿರಾರು ತೆರನವು. ಕೇವಲ ಏಕಮುಖಿಯಾಗಿ ಹರಿಯುವ ಮನೋವ್ಯಾಪಾರದಿಂದ, ಸಾಧನೆಯಿಂದ ನಮ್ಮ ಜೀವನ ಸಂಪೂರ್ಣ ವಿಕಾಸಗೊಳ್ಳುವುದಿಲ್ಲ ಅನಿಸುತ್ತದೆ.











Reviews
There are no reviews yet.