ಇಪ್ಪತ್ತನೆ ಶತಮಾನದ ಸ್ಫೋಟಕ ಪ್ರತಿಭೆ ಪಿ. ಲಂಕೇಶ್, ಕರ್ನಾಟಕದಲ್ಲಿ ಕುವೆಂಪು ಆನಂತರದ ನಿರ್ಣಾಯಕ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವ, ಸೃಜನಶೀಲ ಬರವಣಿಗೆ, ಪತ್ರಿಕೋದ್ಯಮ, ಸಿನಿಮಾ, ರಾಜಕೀಯ ಪ್ರಯೋಗಗಳಿಂದಾಗಿ ಕನ್ನಡ-ಕರ್ನಾಟಕದ ಜನಮಾನಸವನ್ನು ಆಳವಾಗಿ ಆವರಿಸಿದ ಸಾಂಸ್ಕೃತಿಕ ಚೇತನ ಲಂಕೇಶ್. ಶ್ರೀಸಾಮಾನ್ಯರು ಮತ್ತು ಸಾಹಿತ್ಯದ ವಿದ್ಯಾರ್ಥಿಗಳು ಓದಲು ಬಯಸುವ ಲಂಕೇಶರ ಕೃತಿಗಳ ಮರುಮುದ್ರಣಕ್ಕಾಗಿ ನಿರಂತರವಾದ ಬೇಡಿಕೆ ಮತ್ತು ಒತ್ತಾಯಗಳಿದ್ದವು. ಕನ್ನಡದ ಓದುಗರಿಗೆ ಅವರ ಸಾಹಿತ್ಯವನ್ನು ದೊರಕಿಸುವುದು ನಮ್ಮ ಕರ್ತವ್ಯವೆನ್ನುವ ಹಿನ್ನೆಲೆಯಲ್ಲಿ ಮೊದಲಿಗೆ ‘ಲಂಕೇಶರ ಸಮಗ್ರ ಕತೆಗಳು’ ಪ್ರಕಟವಾಗುತ್ತಿದೆ. 1992ರಲ್ಲಿ ಲಂಕೇಶರು ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ’, ‘ಕಲ್ಲು ಕರಗುವ ಸಮಯ’ ಕಥಾಸಂಕಲನಗಳನ್ನು ಒಂದೆಡೆ ಸೇರಿಸಿ ‘ಸಮಗ್ರ ಕಥೆಗಳು’ ಪುಸ್ತಕವನ್ನು ಪ್ರಕಟಿಸಿದ್ದರು. ಈ ನಾಲ್ಕು ಕಥಾಸಂಕಲನಗಳ ಜೊತೆಗೆ, ಆ ಸಂಪುಟದ ಬಳಿಕ ಪ್ರಕಟವಾದ ‘ಉಲ್ಲಂಘನೆ ಮತ್ತು ಇತರ ಕಥೆಗಳು’ ಹಾಗೂ ‘ಮಂಜು ಕವಿದ ಸಂಜೆ’ ಸಂಕಲನಗಳನ್ನು ಈ ಪುಸ್ತಕದಲ್ಲಿ ಕೊಡುತ್ತಿದ್ದೇವೆ. ಇಂದಿರಾ ಲಂಕೇಶ್ ಪ್ರಕಾಶನದಿಂದ ಇದನ್ನು ಪ್ರಕಟಿಸಲು ನಮಗೆ ಹೆಮ್ಮೆ ಮತ್ತು ಸಂತೋಷ.











Reviews
There are no reviews yet.