ಇದು ದೃಷ್ಟಾಂತ ಕತೆ ಮಾದರಿಯ ಕೃತಿ. ‘ಅಂಬೇಡ್ಕರ್ ಬೌದ್ಧ ಧರ್ಮವನ್ನು ಯಾಕೆ ಸ್ವೀಕರಿಸಿದರು?’ ಎಂಬ ಪ್ರಶ್ನೆಗೆ ‘ನಿಮ್ಮ ಪ್ರಕಾರ ಬೌದ್ಧ ಧರ್ಮ ಸ್ವೀಕರಿಸದೆ ಇನ್ನೇನು ಮಾಡಬಹುದಿತ್ತು?’ ಎಂಬ ಪ್ರತಿ ಪ್ರಶ್ನೆಯನ್ನು ಹಾಕುವುದರ ಬದಲಿಗೆ ಬರೆದ ಉತ್ತರ ರೂಪಿ ಕೃತಿ. ಮುಖ್ಯ ಕಾಲಘಟ್ಟಗಳನ್ನು ಸಂಗ್ರಹವಾಗಿ, ಸರಳವಾಗಿ, ಸಮುಚಿತವಾಗಿ ನಿರೂಪಿಸಿರುವ ಕೃತಿ.
ಯಾವ ಪ್ರಮಾಣದ ತಾಪಮಾನದಲ್ಲಿ, ಯಾವ ಪ್ರಮಾಣದ ಶಾಖದಲ್ಲಿ ನೆಲದೊಡಲಲ್ಲಿ ಅಂಬೇಡ್ಕರ್ ಎಂಬ ಶುದ್ದ ವಜ್ರ ರೂಪುಗೊಂಡಿತು ಎಂಬುದನ್ನು ರಂಜನೀಯಗೊಳಿಸದೆ ನಮ್ಮೆದುರಿಗಿಟ್ಟಿರುವ ಹೃದ್ಯವಾದ ಬರವಣಿಗೆ ಇದು. ‘ಬಾಬಾಗಳಿದ್ದಾರೆ, ಸಾಹೇಬರುಗಳೂ ಇದ್ದಾರೆ, ಆದರೆ ಬಾಬಾಸಾಹೇಬರು ಮಾತ್ರ ಒಬ್ಬರೇ ಒಬ್ಬರು’ ಎನ್ನುವುದನ್ನು ಭಂತೆ ಭದಂತ ಆನಂದ ಕೌಸಲ್ಯಾಯನ ಕಾಣಿಸಿದ್ದಾರೆ. ಅವರ ಒಡನಾಡಿಯೂ ಆಗಿದ್ದ ಭಂತೆ ಭದಂತ ಅಪಾರ ಪ್ರೇಮ ಹಾಗೂ ಗೌರವದಿಂದ ಬರೆದಿರುವ ಈ ಕೃತಿ ಬದಲಾಗಲು ಒಪ್ಪದ ಸವರ್ಣೀಯ ಹಿಂದೂಗಳ ನಿರಂತರ ನಿಷ್ಕರುಣೆಗೆ ರೋಸಿ, ಪ್ರಜ್ಞಾ ಕರುಣಾ, ಮೈತ್ರಿಯ ಬೋಧಿವೃಕ್ಷದ ನೆರಳಿಗೆ ಹೋಗಿ ನಿಂತ, ಆ ಮೂಲಕ ಮಾನವತೆಯ ಮಹಾಯಾನ ಆರಂಭಿಸಿದ ವೃತ್ತಾಂತವನ್ನು ಹೇಳುತ್ತದೆ.
ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಲೇಖಕ ವಿಕ್ರಮ ವಿಸಾಜಿ ಇದನ್ನು ಎಷ್ಟು ಚೆನ್ನಾಗಿ ಅನುವಾದಿಸಿದ್ದಾರೆಂದರೆ ಓದುವಾಗ ಇದು ಅನುವಾದವೆಂಬ ನೆನಪೇ ಹುಟ್ಟುವುದಿಲ್ಲ. ಡಾ. ಅಂಬೇಡ್ಕರ್ ಅವರ ಜೀವನ, ಸಾಧನೆಯ ಬಗ್ಗೆ ಕನ್ನಡದಲ್ಲಿ ಸಾವಿರಾರು ಪುಟಗಳಷ್ಟು ಸಾಹಿತ್ಯ ಬಂದಿದೆ. ಹಾಗಿದ್ದೂ ಒಂದು ಚೊಕ್ಕವಾದ ಕೃತಿಯನ್ನು ಅನುವಾದಿಸಿ ಅಂಬೇಡ್ಕರ್ ಅವರಿಗೆ ಗೌರವಾರ್ಪಣೆ ಸಲ್ಲಿಸಿರುವ ವಿಕ್ರಮ ವಿಸಾಜಿಗೆ ಅಭಿನಂದನೆಗಳು.
ಡಾ. ಬಂಜಗೆರೆ ಜಯಪ್ರಕಾಶ











Reviews
There are no reviews yet.