ಚಿಕ್ಕಮಗಳೂರು ಜಿಲ್ಲೆಯ ಸೊಲ್ಲಾಪುರ ಎ೦ಬ ಹಳ್ಳಿಯಲ್ಲಿ ಹುಟ್ಟಿ, ಮುಗಳಿಯನ್ನು ಕರ್ಮಭೂಮಿಯಾಗಿ ಸ್ವೀಕರಿಸಿ, ತನ್ನ ಜನಪದ ಕಲೆಯನ್ನು ಬದುಕಿನ ಉಸಿರಾಗಿಸಿಕೊಂಡು, ಅದರಿ೦ದಾಗಿಯೇ ಅಸಾಧಾರಣ ಎತ್ತರಕ್ಕೇರಿದ ಲಕ್ಷ್ಮೀ ದೇವಮ್ಮ.ಎಸ್.ಜಿ., ಅವರ ಆತ್ಮಕಥನ ‘ಎದೆಯ ಪದ’. ಓರ್ವ ವ್ಯಕ್ತಿಯು ಬದುಕಿನ ಜಂಜಡದಲ್ಲಿ ಎಲ್ಲೋ ಕಳೆದು ಹೋಗಬಹುದಾದ ಸಾಧ್ಯತೆಯೇ ಹೆಚ್ಚಿದ್ದಾಗ, ತನ್ನ ಉಸಿರ೦ತೆ ಕಾಪಾಡಿಕೊ೦ಡ ಕೀರ್ತನೆ, ತತ್ವಪದ, ಜನಪದ ಹಾಡು ಮತ್ತು ಮಹಾಕಾವ್ಯ, ಕೋಲಾಟದ ಹಾಡುಗಳು ಮು೦ತಾದ ಜಾನಪದ ಕಲೆಗಳ ಮೂಲಕ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತ, ಮನೆಯ ಜಗತ್ತಿನಿಂದ ಹೊರಗಿನ ಜಗತ್ತಿಗೆ ತೆರೆದುಕೊ೦ಡು, ಸಾಧನೆಗೈದ ಅಪರೂಪದ ವ್ಯಕ್ತಿಗಳಲ್ಲಿ ಲಕ್ಷ್ಮೀದೇವಮ್ಮ ಅವರು ಒಬ್ಬರು. ಲಕ್ಷ್ಮೀದೇವಮ್ಮ ಅವರ ಅಪಾರ ನೆನಪಿನ ಶಕ್ತಿ, ಆಶುಕವಿತ್ವದ ಪ್ರತಿಭೆ, ಹೊಸತನ್ನು ಕಲಿಯುವ ಅಸ್ಥೆ, ಸಾಧನೆಯ ಛಲ, ಸರಕಾರದ ವಿವಿಧ ಇಲಾಖೆಗಳ ಜನಪರ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡ ಬಗೆ ಮತ್ತು ಸಾಮುದಾಯಿಕ ಬದುಕಿನ ಅವರ ಲೋಕದೃಷ್ಟಿಮು೦ತಾದ ಸ೦ಗತಿಗಳು ಬೆರಗನ್ನು ಹುಟ್ಟಿಸುತ್ತವೆ. ಇವು ನೂರಾರು ಜನರಿಗೆ ಬದುಕಲ್ಲಿ ಭರವಸೆಯನ್ನು ಹುಟ್ಟಿಸುವ, ಸಾಧನೆಯ ಛಲವನ್ನು ಹುಟ್ಟುಹಾಕುವ, ಸಾರ್ಥಕ ಬದುಕಿನ ಮಾದರಿಯನ್ನು ತೋರುವ ಕೈಗನ್ನಡಿಯಾಗಿವೆ. ಅವರು ತಾವು ಒಬ್ಬರೇ ಬೆಳೆಯದೆ, ತಮ್ಮ ಸುತ್ತಲಿನ ಹಲವರ ಪ್ರತಿಭೆಗಳನ್ನು ಗುರುತಿಸಿ, ಅವರ ವಿಕಸನಕ್ಕೆ ಅವಕಾಶಗಳನ್ನು ನಿರ್ಮಿಸಿದವರು. ತಾವು ಮನೆಯ ಜಗತ್ತಿನಿ೦ದ ಪ೦ಚಾಯಿತಿಯ ಹೊರಜಗತ್ತಿಗೆ ತೆರೆದುಕೊಂಡು, ತಮ್ಮ ಗಾಯನ ಕಲೆಯ ಮೂಲಕ ಸುತ್ತೇಳು ಹಳ್ಳಿಗಳು ಮಾತ್ರವಲ್ಲ, ತಾಲೂಕು, ಜಿಲ್ಲೆಗಳ ಮತ್ತು ರಾಜ್ಯದ ಎಲ್ಲೆಗಳನ್ನು ಮೀರಿ, ರಾಷ್ಟ್ರೀಯ ಮಾನ್ಯತೆಯನ್ನು ತಮ್ಮದಾಗಿಸಿಕೊ೦ಡ ಕಥನವು ರೋಮಾ೦ಚಕವೂ ಅನುಕರಣೀಯವೂ ಆಗಿದೆ. ಇ೦ಥ ಜನಪದ ಕಲಾವಿದೆಯ ಆತ್ಮಕಥನಕ್ಕೆ ಅಕ್ಷರ ರೂಪವನ್ನು ನೀಡಿದವರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ದಕ್ಷ ಅಧಿಕಾರಿಯಾಗಿ ದುಡಿದ ಪ್ರೊ. ಆರ್. ಸುನ೦ದಮ್ಮ ಅವರು ಎ೦ಬುದು ಇನ್ನೊ೦ದು ಗಮನಾರ್ಹ ಸ೦ಗತಿ. ಇದು ಸ್ತ್ರೀವಾದಿ ದೃಷ್ಟಿಕೋನದ ಸೊಗಸು ಎ೦ದು ಅನಿಸುತ್ತದೆ. ಲಕ್ಷ್ಮೀದೇವಮ್ಮ ಅವರ ಮಾತುಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿ, ಜೋಡಿಸಿ, ಓದಿನ ಓಘಕ್ಕೆ ಚ್ಯುತಿ ಬರದ೦ತೆ ನಿರೂಪಿಸುವ ಮಹತ್ವದ ಕೆಲಸ.










Reviews
There are no reviews yet.